ಭವಾನಿ ಪ್ರಸಾದ ಮಿಶ್ರ
	1914. ಹಿಂದಿ ಲೇಖಕರು ಹಾಗೂ ನವ್ಯಕವಿ. ಹುಟ್ಟಿದ್ದು ಮಧ್ಯಪ್ರದೇಶದ ಹೋಶಂಗಾಬಾದ್‍ನಲ್ಲಿ. ಪದವೀಧರರಾದ ಇವರು ಸಾಮಾನ್ಯ ಜನರ ಮಧ್ಯದಲ್ಲಿ ಬೆಳೆದು ಬಾಳಿದವರು. ಕೆಲಕಾಲ ಕಲ್ಪನಾ ಪತ್ರಿಕೆಯ ಸಂಪಾದಕರಾಗಿದ್ದರು. ಹಲವು ವರ್ಷಗಳ ಕಾಲ ಆಕಾಶವಾಣಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದರು. ಗಾಂಧಿವಾಙ್ಮಯದ ಸಂಪಾದಕರಾಗಿಯೂ ಕೆಲಸ ಮಾಡಿದರು. ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ ಜೈಲುವಾಸ ಅನುಭವಿಸಿದರು. ಇವರ ಕವನಗಳು ದೂಸರಾ ಸಪ್ತಕ್; ಗೀತ್ ಫರೋಶ್; ಚಕಿತ್ ಹೈ ದುಃಖ್; ಅಂಧೇರಿ ಕವಿತಾಯೇಂ; ಗಾಂಧೀ ಪಂಚಶತೀ ಕವನ ಸಂಕಲನಗಳಲ್ಲಿ ಪ್ರಕಟವಾಗಿವೆ. ಬುನೀ ಹು ಈ ರಸ್ಸೀ ಎಂಬ ಕೃತಿಗೆ ಸಾಹಿತ್ಯ ಅಕಾಡಮಿ ಪ್ರಶಸ್ತಿ ಲಭಿಸಿದೆ.

	ಇವರ ಕವನಗಳು ಹಿಂದೀ ಸಾಹಿತ್ಯಕ್ಕೆ ಒಂದು ವಿಶಿಷ್ಟ ಕೊಡುಗೆ ಎನ್ನಬಹುದು. ಹಳ್ಳಿಯ ಸಂಸ್ಕಾರ ಪಡೆದ ಈ ಕವಿ ಜನಸಾಮಾನ್ಯರ ಜೀವನವನ್ನು ಯಥಾವತ್ತಾಗಿ ಚಿತ್ರಿಸಿರುವುದಲ್ಲದೆ ಸಾಮಾನ್ಯರ ಆಡು ಭಾಷೆಯನ್ನೂ ಯಶಸ್ವಿಯಾಗಿ ತಮ್ಮ ಕವನಗಳಲ್ಲಿ ಬಳಸಿದ್ದಾರೆ.

	ಇವರು ಸಹಜ ಸಂವೇದನೆಯ ಕವಿ. ಕಮಲ್ ಕೆ ಫೂಲ್; ವಾಣಿ ಕೀ ದೀನತಾ; ಟೂಟ ನೇ ಕಾ ಸುಖ್ ಇತ್ಯಾದಿ ಕೃತಿಗಳಲ್ಲಿ ಕವಿಯ ಸಂವೇದನ ಅತ್ಯಂತ ಸೂಕ್ಷ್ಮವೂ ಆಕಸ್ಮಿಕವೂ ಆಗಿದೆ.						
(ವಿ.ಡಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ